ಕಿರುಕುಳ ಕಾಳಗ

 ಶತ್ರುಗಳಿಗೆ ಕಿರುಕುಳ ಕೊಡಲು ಸಣ್ಣ ಸಣ್ಣ ದಳಗಳು ಹೊಂಚುಹಾಕುತ್ತ ಪ್ರತ್ಯೇಕ ಪ್ರತ್ಯೇಕವಾಗಿ ಮೇಲೆ ಬಿದ್ದು ಕ್ರಮವಿಲ್ಲದೆ ನಡೆಸುವ ತುಂಡು ಕಾಳಗ (ಗೆರಿಲ ವಾರ್ಫೇರ್). ಕುಯುಕ್ತಿ, ಕಪಟ ತಂತ್ರಗಳಿಂದ ಹೋರಾಟದ ಶಕ್ತಿಯನ್ನು ಕುಗ್ಗಿಸುವುದು ಈ ಕಾಳಗದ ಉದ್ದೇಶ. ಈ ಯೋಧರು ಸೇತುವೆ, ಅಣೆಕಟ್ಟು, ಜಲಾಶಯ ರಸ್ತೆ ರೈಲುಮಾರ್ಗ, ಕಾರ್ಖಾನೆ, ಯಂತ್ರೋಪಕರಣ, ವಿದ್ಯುದುತ್ಪಾದಕ ಕೇಂದ್ರ, ಹಡಗು ಟೆಲಿಫೋನ್, ಟಿಲಿಗ್ರಾಫ್‍ಗಳನ್ನು ನಾಶಮಾಡುತ್ತಾರೆ. ಕಾಡು, ಗಣಿ, ಹೊಲ, ಪೈರು, ಹೊಲಸುನೀರಿನ ಕಾಲುವೆ, ಸುರಂಗದ ಚರಂಡಿ, ಗುಹೆ, ಕಂದಕ, ಕಣಿವೆಗಳಲ್ಲಿ ಅವಿತುಕೊಂಡು ಹೊಂಚುಹಾಕುತ್ತ ಮೋಟಾರ್ ಕಾರ್, ಟ್ರಕ್, ರೈಲುಗಾಡಿಗಳನ್ನು ಉರುಳಿಸಿ. ಸಾವಿರಾರು ಶತ್ರುಗಳನ್ನು ಕೊಂದು, ಶಸ್ತ್ರಾಸ್ತ್ರಗಳನ್ನು ಹಿಡಿದುಕೊಳ್ಳತ್ತಾರೆ. ಪಾಳ್ಯ, ಡಿಪೊ, ಉಗ್ರಾಣ, ಮದ್ದುಗುಂಡುಗಳನ್ನು ಧ್ವಂಸಮಾಡುತ್ತಾರೆ. ರಾತ್ರಿ ಕತ್ತಲಲ್ಲಿ ಶತ್ರುಗಳ ಹಿಂಬದಿಯ ಫೌಜುಗಳನ್ನು ಏಕಾಏಕಿ ಮಿಂಚಿನ ವೇಗದಲ್ಲಿ ಹೊಡೆದುಹಾಕಿ ಕೈಗೆ ಸಿಕ್ಕದೆ ಮಾಯವಾಗುತ್ತಾರೆ. ಶತ್ರುಗಳಿಗೆ ಹೋಗುವ ಆಹಾರ, ಕಾಗದಪತ್ರಗಳನ್ನು ತಡೆಗಟ್ಟುತ್ತಾರೆ.

 ಈ ಅರೆಮರೆ ತುಕಡಿ ಕಾಳಗಕ್ಕೆ ಗೆರಿಲ ಯುದ್ಧವೆಂದು ಹೆಸರು. ಗೆರಿಲ ಎಂಬುದು ಸ್ಪೇನ್ ಭಾಷೆಯ ಒಂದು ಶಬ್ದದಿಂದ ಬಂದಿದೆ. ಅದರ ಅರ್ಥ ಚಿಕ್ಕ ಕಾಳಗ. 1809-13ರಲ್ಲಿ ಸ್ಪೇನ್ ಪೋರ್ಚುಗಲ್ಲಿನ ಗೆರಿಲೆರೋ ತಂಡದವರು ವೆಲಿಂಗ್‍ಟನ್ನನ ನಾಯಕತ್ವದಲ್ಲಿ ಭಾರಿ ಫ್ರೆಂಚ್ ಸೇನೆಯನ್ನು ಪದೇಪದೇ ಹೆಣಗಾಡಿಸಿ ದೇಶದಿಂದ ಓಡಿಸಿಬಿಟ್ಟರು. ಅಂದಿನಿಂದ ಇಂಥ ಕಿರುಕುಳ ಕಾಳಗಕ್ಕೆ ಗೆರಿಲಯುದ್ಧವೆಂದು ಹೆಸರು ನಿಂತಿದೆ. ಗೆರಿಲಗಳು ಕ್ರಮಬದ್ಧ ಸೈನಿಕರಲ್ಲ. ಸೈನಿಕ ಉಡುಪನ್ನು ಧರಿಸುವುದಿಲ್ಲ. ಅಸೈನಿಕ ಪೌರನಿವಾಸಿಗಳು, ಶಿಸ್ತು, ಕಟ್ಟುಪಾಡಿನಲ್ಲಿ ತರಬೇತಿ ಪಡೆಯುತ್ತಾರೆ. ಭಾರದ ಆಯುಧ, ಉಪಕರಣಗಳನ್ನು ಒಯ್ಯುವುದಿಲ್ಲ. ಅವರಿಗೆ ನಿರ್ದಿಷ್ಟ ನಿವಾಸ, ಸಿಬ್ಬಂದಿ, ಡಿಪೋ, ಪಾಳ್ಯಗಳಿಲ್ಲ. ರಕ್ಷಿಸಿಕೊಳ್ಳಬೇಕಾದ ಸ್ಥಾನಗಳಿಲ್ಲ. ಅತ್ಯಂತ ಅನುಕೂಲವಾದ ಸಂದರ್ಭಗಳಲ್ಲಿ ವಿನಾ ಅವರು ಶತ್ರುಗಳೆದುರಿಗೆ ನಿಂತು ಕಾದಾಡುವುದಿಲ್ಲ. ಕೆಲವು ಸಾರಿ ದರೋಡೆ ಕಳ್ಳರ ತಂಡಗಳೂ ಗೆರೆಲ ಯುದ್ಧವನ್ನು ಮಾಡುತ್ತವೆ.

 ಗೆರಿಲಗಳಿಗೆ ಧೈರ್ಯ, ಶೀಘ್ರ ಚಲನವಲನ, ಸಹಿಷ್ಣತೆಗಳಿರಬೇಕು. ಸ್ಥಳೀಯ ನಿವಾಸಿಗಳ ಸಹಕಾರ, ಸಹಾನುಭೂತಿಗಳನ್ನು ಗಳಿಸಿದರೆ ಅವರಿಂದ ಅನೇಕ ಸೌಕರ್ಯಗಳನ್ನು ಪಡೆಯಬಹುದು. ಶತ್ರುಗಳಿಗೆ ಗುಟ್ಟು ಕೊಡದೆ, ಅವರ ವಿಷಯಗಳನ್ನು ಚಮತ್ಕಾರದಿಂದ ಸಂಗ್ರಹಿಸಿ, ರಾಷ್ಟ್ರೀಯ ಸೈನ್ಯದೊಡನೆ ಸುಸಂಘಟಿತವಾಗಿರಬೇಕು.

 ಅಮೆರಿಕದ ಕ್ರಾಂತಿಯಲ್ಲಿ ವಲಸೆಗಾರರು ಗೆರಿಲ ಪಡೆಗಳು ಬ್ರಿಟಿಷ್ ಸೈನ್ಯಗಳ ಮೇಲೆ ಹಾವಳಿಮಾಡಿದವು. ಅಮೆರಿಕದ ರಾಷ್ಟ್ರಾಂತಯುದ್ಧದಲ್ಲಿ ಗೆರಿಲ ಚಳವಳಿ ಪ್ರಬಲವಾಗಿತ್ತು. ಇಟಲಿ ದೇಶವನ್ನು ಏಕೀಕರಿಸಲು ಗೈರಿ ಬಾಲ್ಟಿ ಗೆರಿಲ ಕಾಳಗಗಳನ್ನು ನಡೆಸಿದ. ಬೋಆರ್ ಯುದ್ಧದಲ್ಲಿ ಬೋಆರ್ ಗೆರಿಲಗಳು ನಿಪುಣತೆಯಿಂದ ಬ್ರಿಟಿಷ್ ಸೇನೆಗಳನ್ನು ಗೋಳಾಡಿಸಿದರು. ಒಂದನೆಯ ಮಹಾಯುದ್ದದಲ್ಲಿ ಅರಬ್ಬೀ ಗೆರಿಲಗಳು ಕರ್ನಲ್ ಲಾರೆನ್‍ಸನ ಮುಂದಾಳ್ತನದಲ್ಲಿ ತಮಗಿಂತಲೂ ಐದರಷ್ಟು ದೊಡ್ಡದಾಗಿದ್ದ ತುರ್ಕೀ ಸೇನೆಗಳ ಮೇಲೆ ಹಾವಳಿಮಾಡಿ 35,000 ತುರ್ಕಿಯವರನ್ನು ಕೊಂದರು ಮತ್ತು ಅಷ್ಟೇ ಮಂದಿಯನ್ನು ಸೆರೆಹಿಡಿದರು. ಫ್ರಾನ್ಸಿನ ಗೆರಿಲಗಳು ದಕ್ಷಿಣ ಕ್ಯಾರೊಲೀನದಲ್ಲಿ ಕಾರ್ನವಾಲಿಸ್‍ನ ಭಾರಿ ಸೈನ್ಯವನ್ನು ಕಾಡಿದರು. ನೆಪೋಲಿಯನ್ ಮಾಸ್ಕೋದಿಂದ ಹಿಮ್ಮೆಟ್ಟುತ್ತಿದ್ದಾಗ ರಷ್ಯದ ರೈತರು ಫ್ರೆಂಚರನ್ನು ಹೊಡೆದೋಡಿಸಿದರು. ಚೀನದ ತಾಯ್‍ಪಿಂಗ್ ದಂಗೆಯಲ್ಲಿ ರೈತಾಪಿ ಜನರು, ಕೂಲಿಗಳು ಸಮುದ್ರ ಕಳ್ಳರು ಮೌಚೂ ರಾಜವಂಶಾವಳಿಯ ಮೇಲೆ ಗೆರಿಲ ಕಾಳಗ ಮಾಡಿದಾಗ ಎರಡು ಕೋಟಿ ಜನರು ಮಡಿದರು. ಐರ್ಲೆಂಡಿನ ಸ್ವರಾಜ್ಯ ಚಳವಳಿಯಲ್ಲಿ ಡೀ ವಲೇರನ ಗೆರಿಲಗಳು ಬ್ರಿಟಿಷರನ್ನು ನರಳಾಡಿಸಿ ಭೀಕರ ಕೃತ್ಯಗಳನ್ನು ನಡೆಸಿದರು. ಲೆನಿನ್ನನ ಬೋಲ್‍ಷೆವಿಕ್ ಕ್ರಾಂತಿಯಲ್ಲಿ ಸೋವಿಯತ್ ಗೆರಿಲಗಳು ಉಗ್ರವಾಗಿ ಹೋರಾಡಿದರು. ಮಾವೋತ್ಸೆತುಂಗನ ಗೆರಿಲಗಳು ಜಪಾನಿ ಆಕ್ರಮಿಗಳನ್ನೂ ಚಿಯಾಂಗ್-ಕೈ-ಷೆಕ್‍ನ ಸೇನೆಯನ್ನೂ ಓಡಿಸಿಬಿಟ್ಟರು.

 ಜರ್ಮನರು ರಷ್ಯವನ್ನು ಮುತ್ತಿದಾಗ ರಷ್ಯನ್ ಗೆರಿಲಗಳು ಜರ್ಮನ್ ಸೈನಿಕರಂತೆಯೂ ಹಳ್ಳಿಗಾಡಿನವರಂತೆಯೂ ವೇಷಬದಲಿಸುತ್ತ ಶತ್ರುಗಳ ಕಣ್ಣಿಗೆ ಮಣ್ಣೆರಚಿ ಮೂರು ಲಕ್ಷ ಜರ್ಮನರನ್ನು ಕೊಂದರು. 500  ವಿಮಾನ, ಸಾವಿರಾರು ಮೋಟಾರ್ ವಾಹನಗಳಿಗೆ ಗುಂಡಿಕ್ಕಿದರು. 3,000 ರೈಲುಗಳನ್ನು ಉರುಳಿಸಿದರು. 3,300 ಸೇತುವೆಗಳನ್ನು ಮುರಿದರು. 1,200 ಟ್ಯಾಂಕ್, 4.030 ಲಾರಿ, 895 ಮಳಿಗೆಗಳನ್ನು ಹಿಡಿದರು. ಪೈರುಗಳು, ಧಾನ್ಯದವಸಗಳು ಶತ್ರುಗಳಿಗೆ ಸಿಕ್ಕದಂತೆ ಸುಟ್ಟುಬಿಟ್ಟರು. ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ, ಹತ್ತು ಲಕ್ಷ ಅಶ್ವಸಾಮಥ್ರ್ಯ ವಿದ್ಯುಚ್ಛಕ್ತಿ ಉದ್ಛವಿಸುತ್ತಿದ್ದ, ನೀಸರ್ ಅಣೆಕಟ್ಟನ್ನು ನಾಶಮಾಡಿದರು. ಡಾನ್‍ನದಿಯ ಏರಿಗಳನ್ನು ಕೆಡವಿ ದೇಶವನ್ನು ನೀರಿನ ಪ್ರವಾಹದಿಂದ ಹಾವಳಿ ಮಾಡಿದರು. ಭಾರತ, ಆಫ್ರಿಕಗಳಲ್ಲಿ ಬ್ರಿಟಿಷರ ಮೇಲೆ, ಮೊರಾಕೋದಲ್ಲಿ ಫ್ರೆಂಚರು ಸ್ಪೇನಿನವರ ಮೇಲೆ ಬಾಲ್ಕನ್‍ನಲ್ಲಿ ತುರ್ಕಿಯವರು ಆಸ್ಟ್ರೋಹಂಗರಿಯನ್ನರ ಮೇಲೆ ಗೆರಿಲಾ ಯುದ್ಧಗಳಾದವು. ವರ್ಜೀನಿಯದಲ್ಲಿ ಹತ್ತು ಲಕ್ಷ ಶತ್ರುಗಳು ಮಡಿದರು. ಗ್ರೀಸ್, ಬಲ್ಗೇರಿಯ, ರೂಮೇನಿಯ, ಇಂಡೊನೇಷ್ಯ, ಬರ್ಮ, ಮಲಯ, ಥೈಲೆಂಡ್, ಆಲ್ಜೀರಿಯ, ಲೇ ಆಸ್, ಕೊರಿಯಗಳಲ್ಲಿ ಗೆರಿಲಾ ಪ್ರಾಬಲ್ಯವಿತ್ತು. ಕೀನ್ಯದಲ್ಲಿ ಮಾವ್-ಮಾವ್, ಫಿಲಿಪೀನ್ಸ್‍ನಲ್ಲಿ ಹೂಕ್, ವಿಯೆಟ್ನಾಂನಲ್ಲಿ ವಿಯೆಟ್ ಕಾಂಗ್ ಚಳವಳಿಗಳು ಘೋರವಾಗಿದ್ದವು. ಮೊಳೆಗಳಿರುವ ಹಲಗೆಗಳನ್ನು ಮಾರ್ಗಗಳಲ್ಲಿಟ್ಟು ಶತ್ರುಗಳ ಮೋಟರ್ ಟೈರ್‍ಗಳನ್ನು ಚುಚ್ಚಿಸುವುದು; ಹಾದಿಗಳಲ್ಲಿ ಎಣ್ಣೆಸುರಿದು ಶತ್ರುಗಳನ್ನು ಬೀಳಿಸುವುದು; ಹ್ಯಾಂಡ್ ಗ್ರೆನೇಡ್, ಬಾಂಬುಗಳನ್ನು ಗುಂಪುಗಳಿಗೆಸೆಯುವುದು, ಮನುಷ್ಯರನ್ನು ಕದ್ದುಕೊಂಡು ಹೋಗುವುದು; ಗುಪ್ತವಧೆ ಮುಂತಾದ ಭಯೊತ್ಪಾದಕ ಕೃತ್ಯಗಳು ನಡೆದವು. ಧೀರ ಸ್ತ್ರೀಯರೂ ಗೆರಿಲಾಗಳಾದರು. ಸೈಪ್ರಸ್‍ನಲ್ಲಿ ಜನರಲ್ ಗ್ರಿವಾಸ್, ಯುಗೋಸ್ಲಾವಿಯದಲ್ಲಿ ಮಾರ್ಷಲ್ ಟಿಟೋ, ಬೋಲೀವಿಯದಲ್ಲಿ ಗ್ವೆವವಾರ್, ವಿಯೆಟ್ನಾಂನಲ್ಲಿ ಹೋಚಿಮಿನ್, ಕ್ಯೂಬಾದಲ್ಲಿ ಕ್ಯಾಸ್ಟ್ರೋ-ಇವರ ಅದ್ಭುತ ಗೆರಿಲಾ ಸಾಹಸಗಳು ಲೋಕವನ್ನು ಬೆರಗುಗೊಳಿಸಿದವು.         

 (ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ